Utkarsh 2016 Kaliyuva mane

 

 ಕಲಿಯುವ ಮನೆಯ ಮಕ್ಕಳ ಮನಸಲಿ ಹರ್ಷವ ತುಂಬಲು ಯುವಕರು ಮಾಡುವ ಪ್ರಯೋಗಗಳಿಗೇನು ಕಡಿಮೆ ಇಲ್ಲ. ಕೆಂಚಲಗೂಡಿನಲ್ಲಿರುವ ದಿವ್ಯದೀಪ ಚಾರಿಟೆಬಲ್ ಟ್ರಸ್ಟ್‌ ನಡೆಸುತ್ತಿರುವ ಈ ಪ್ರಾಯೋಗಿಕ ಶಾಲೆಯಲ್ಲಿ ನಡೆದ “ಉತ್ಕರ್ಷ” ಅದಕ್ಕೆ ಮತ್ತೊಂದು ಉದಾಹರಣೆ.
ಸರಿಯಾಗಿ ಒಂದು ತಿಂಗಳ ಹಿಂದೆ ಎನ್ ಐ ಇ ಕಾಲೇಜಿನ ಕ್ಯಾಂಟೀನ್ ಹಟ್ ಅಲ್ಲಿ ಇದಕ್ಕೆ ಭುನಾದಿಯನ್ನ ಹಾಕಲಾಯಿತು. ಅಝರ್ ಅವರಿಂದ ಶುರುವಾದ ಈ ಆಲೋಚನೆ ನಂತರ ಎಲ್ಲರಲ್ಲೂ ಹಬ್ಬಿ ಹೆಮ್ಮರವಾಗಿ ಬೆಳೆಯಿತು. ಗ್ರಾಮದ ಆ ಮುಗ್ದ ಮಕ್ಕಳಲ್ಲಿರುವ ಅಗಾಧವಾದ ಅಪ್ರತಿಮ ಪ್ರತಿಮೆಯನ್ನು ಹೊರಕ್ಕೆ ತೆಗೆಯಲು, ಅದನ್ನು ಅನಾವರಣಗೊಳಿಸಲು ಯುವಕರೆಲ್ಲರೂ ಸಜ್ಜಾದರು. ಅದಕ್ಕೆ ತಕ್ಕಂತೆ ಕಾರ್ಯಗಳನ್ನು ಎಲ್ಲರೂ ಹಂಚಿಕೊಂಡರು. ಅದರ ಉಸ್ತುವಾರಿಯನ್ನ ವಹಿಸಿಕೊಂಡ ವ್ಯಕ್ತಿ ಗೌತಮ್.
 ಗೌತಮನಿಗಂತೂ ಅದರದ್ದೇ ಚಿಂತೆ. ದಿವ್ಯದೀಪದ ಈ ಹಬ್ಬವನ್ನು ಹೇಗೆ ಮಾಡಿದರೆ ಚಂದ, ಯಾವ ರೀತಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯಬೇಕು, ಅದಕ್ಕೆ ಪೂರಕವಾಗಿ ಸ್ವಯಂಸೇವಕರನ್ನು ಹೇಗೆ ಅನುಗೊಳಿಸಬೇಕು ಎಂದು. ಅವನಿಗೆ ಜೊತೆಯಾದವರು ರಶ್ಮಿ, ಶರತ್, ಸಂತೋಷ್, ನಮ್ರತ, ಸೌಮ್ಯ ಹಾಗೂ ಮುಂತಾದವರು. ಆ ದಿನ ಯಾವ ಯಾವ ಕಾರ್ಯಕ್ರಮ ನಡೆಯಬೇಕು ಎಂದು ಅಝರ್ ಅವರ ಸಹಾಯದ ಮೂಲಕ ನಿರ್ಧರಿಸಲಾಯಿತು. ರಂಗೋಲಿ, ಚಿತ್ರಕಲೆ, ಗಾಯನ, ಕಥೆ ಹೇಳುವಿಕೆ, ಕ್ವಿಝ್, ಸೂಪರ್ ಮಿನಿಟ್ ಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವುದೆಂದು ತೀರ್ಮಾನಿಸಲಾಯಿತು.
ಗೌತಮ್ ” ಉತ್ಕರ್ಷ ” ದ ಸಲುವಾಗಿ ಹತ್ತಕ್ಕಿಂತಲು ಹೆಚ್ಚು ಬಾರಿ ಕಲಿಯುವ ಮನೆಗೆ ಹೋಗಿರುತ್ತಾನೆ. ಅಲ್ಲಿರುವ ಎಲ್ಲಾ ವಿಭಾಗಗಳಿಗೆ ಹೋಗಿ ರಂಗೋಲಿ, ಚಿತ್ರಕಲೆ ಮುಂತಾದ ಎಲ್ಲಾ ಚಟುವಟಿಕೆಗಳಿಗೆ ಯಾವ ಯಾವ ಮಕ್ಕಳು ಭಾಗವಹಿಸುತ್ತಾರೆಂದು ಅವರನ್ನು ಕೇಳಿ, ಮಕ್ಕಳ ಹೆಸರನ್ನು ಬರೆದುಕೊಂಡು ಬಂದ. ಮತ್ತೆ ಮತ್ತೆ ಹೋಗಿ ಮಕ್ಕಳಿಗೆ ನೆನಪಿಸಿದ್ದು, ಸೂಪರ್ ಮಿನಿಟ್ ಗೆ ಮಕ್ಕಳ ಹೆಸರನ್ನು ತೆಗೆದುಕೊಂಡು ಬಂದು ಅದನ್ನು ಎಂಟು ತಂಡಗಳನ್ನಾಗಿ ವಿಂಗಡಿಸಿದ್ದು, ಹೊಸತಾಗಿ ಸೇರ್ಪಡೆಯಾದ ಚಟುವಟಿಕೆಗಳಿಗೆ ಮತ್ತೆ ಮಕ್ಕಳ ಹೆಸರನ್ನು ಬರೆದುಕೊಂಡಿದ್ದು, ಹೀಗೆ ನಾನಾ ಬಾರಿ ಕಲಿಯುವ ಮನೆಗೆ ಅಲೆದಾಡಿದ್ದಾನೆ.
ಸಂತೋಷ್ ಸಹ ಎರಡು ಬಾರಿ ಶಾಲೆಗೆ ಹೋಗಿ ಮಕ್ಕಳಿಗೆ ಹಾಡು, ನೃತ್ಯ ಮತ್ತು ನಾಟಕವನ್ನು ಹೇಳಿಕೊಟ್ಟಿದ್ದಾನೆ. ಹೀಗೆ ಎಲ್ಲರ ಪರಿಶ್ರಮದ ಫಲವಾಗಿ ” ಉತ್ಕರ್ಷ” ಉತ್ಕರ್ಷವಾಗಿ ನೆರೆವೇರಿತು.

ಗುರುವಾರ ಸಂಜೆ ಎಲ್ಲರೂ ಒಟ್ಟಿಗೆ ಸೇರಿ ಕಾರ್ಯಕ್ರಮದ ಪೂರ್ವ ತಯಾರಿಯ ಬಗ್ಗೆ ಚರ್ಚಿಸಿದೆವು. ಪ್ರತಿ ಚಟುವಟಿಕೆಯನ್ನು ನಡೆಸಲು ಸ್ವಯಂ ಸೇವಕರನ್ನು ತಂಡಗಳಾಗಿ ವಿಂಗಡಿಸಲಾಯಿತು. ಆ ಚಟುವಟಿಕೆಯ ಸಂಪುರ್ಣ ಜವಾಬ್ದಾರಿಯನ್ನು ಅವರವರ ಹೆಗಲ ಮೇಲೆ ವಹಿಸಲಾಯಿತು. ಮಾರನೆ ದಿನ ಕೆಲವರು ಕಲಿಯುವ ಮನೆಗೆ ಹೋಗಲು ತೀರ್ಮಾನಿಸಿದರು. ನವೆಂಬರ್ 4, ಶುಕ್ರವಾರ. ಸಂತೋಷ್ ಮತ್ತು ರುತ್ವಿಕ್ ಬೆಳಿಗ್ಗೆ ಕಲಿಯುವ ಮನೆಗೆ ಹೋದರು. ಮಕ್ಕಳು ನೃತ್ಯದಲ್ಲಿ ತಯಾರಾಗಿಲ್ಲವೆಂದು ಸಂತೋಷ್ ಗೆ ತಿಳಿಯಿತು. ತಕ್ಷಣ ಆತ ಮಕ್ಕಳಿಂದ ಒಂದು ನಾಟಕ ಮಾಡಿಸಲು ಸಿದ್ದನಾದ. ಅದರಲ್ಲಿ ಚತುರನಾದ ಆತ ಅಲ್ಲಿಯೆ ಒಂದು ಸ್ಕ್ರಿಪ್ಟ್‌ ಅನ್ನು ಬರೆದು ಮೂರು ಮಕ್ಕಳನ್ನು ತೆಗೆದು ಕೊಂಡು ಒಂದು ಹಾಸ್ಯನಾಟಕಕ್ಕೆ ತಯಾರು ಮಾಡಿದ. ಮಧ್ಯಾಹ್ನದ ವೇಳೆಗೆ ಶರತ್, ಗೌತಮ್, ನಮ್ರತ, ಸೌಮ್ಯ, ವಿನಾಯಕ್, ಮಲ್ಲಿಕಾರ್ಜುನ್ ಎಲ್ಲರೂ ಬಂದರು. ಒಮ್ಮೆ ಎಲ್ಲಾ ಮಕ್ಕಳ ಸಿದ್ಧತೆಯನ್ನು ಗಮನಿಸಿ ಒಂದು ಕಡೆ ಕುಳಿತುಕೊಂಡು ಭಾನುವಾರದ ಕಾರ್ಯಕ್ರಮದ ವೇಳಾಪಟ್ಟಿ ,ಚಟುವಟಿಕೆಗಳು ನಡೆಯುವ ಜಾಗ ಮತ್ತು ಬಹುಮಾನಗಳನ್ನು ನಿರ್ಧರಿಸಲಾಯಿತು. ಸಂಜೆ ಎಲ್ಲರೂ ಹಿಂತಿರುಗಿದರು.

ಶನಿವಾರ ಬೆಳಿಗ್ಗೆಯೇ ನಮ್ರತ ಮತ್ತು ಗೌತಮ್ ಕಲಿಯುವ ಮನೆಗೆ ಹೋದರು. ನಮ್ರತ ಸಂತೋಷ್ ಬರೆದು ಕೊಟ್ಟಿದ್ದ ಸ್ಕ್ರಿಪ್ಟ್‌ ನ ಆಧಾರವಾಗಿ ಮಕ್ಕಳಿಗೆ ನಾಟಕವನ್ನ ಹೇಳಿಕೊಟ್ಟಳು ಮತ್ತು ತಾನು ಮತ್ತು ಸೌಮ್ಯ ಆಯೋಜಿಸಿದ್ದ ಫ್ಯಾಷನ್ ಷೋ ಗೆ ಮಕ್ಕಳನ್ನು ತಯಾರು ಮಾಡಿದರು. ಅಝರ್ ಅವರು ಬೆಂಗಳೂರಿನಿಂದ ಕಲಿಯುವ ಮನೆಗೆ ಬಂದಿದ್ದರು. ಇತ್ತ ಶರತ್ ಮತ್ತು ಭಾರ್ಗವ್ ಮಕ್ಕಳಿಗೆ ಬಹುಮಾನವನ್ನು ತರಲು ಸ್ವಪ್ನ, ಮೋರ್ ಮುಂತಾದ ಮಳಿಗೆಗಳಿಗೆ ಹೋಗಿದ್ದರು. ಎಲ್ಲಾ ಬಹುಮಾನಗಳನ್ನು ತಗೆದು ಕೊಂಡು ಅವರು ಸಹ ಮಧ್ಯಾಹ್ನದ ವೇಳೆಗೆ ಅಲ್ಲಿಗೆ ಬಂದರು. ಸಂಜೆಯ ಹೊತ್ತಿಗೆ ಯಾವ ಯಾವ ಆಟಗಳಿಗೆ ಯಾವ ಯಾವ ಬಹುಮಾನಗಳನ್ನು ಕೊಡಬೇಕೆಂದು ಒಂದು ಕಡೆ ಜೋಡಿಸಿ ತೀರ್ಮಾನಿಸಲಾಯಿತು. ಮಾರನೇ ದಿನ ಬಸ್ ಯಾವ ಸಮಯಕ್ಕೆ ಸ್ವಯಂಸೇವಕರನ್ನು ಕರೆದುಕೊಂಡುಹೋಗಲು ಬರಬೇಕೆಂದು ತೀರ್ಮಾನಿಸಿ ಅಲ್ಲಿಂದ ಶರತ್, ನಮ್ರತ, ಗೌತಮ, ಭಾರ್ಗವ್ ಹೊರಟರು.

ನವೆಂಬರ್ 6 ಭಾನುವಾರ ” ಉತ್ಕರ್ಷ”  9 ಗಂಟೆಗೆ ಸರಿಯಾಗಿ ಶಾಲಾವಾಹನ ಮಕ್ಕಳನ್ನು ಕರೆದುಕೊಂಡು ಬಂತು. ಇಳಿದ ಕೂಡಲೆ ಮಕ್ಕಳೆಲ್ಲರೂ ಹರ್ಷೋದ್ಗಾರದಿಂದ ಓಡಾಡತೊಡಗಿದರು. ಅವರಿಗಂದು ಉಲ್ಲಾಸದ ದಿನ. ತಮ್ಮಲ್ಲಿರುವ ಕಲೆಯನ್ನು ತೋರಿಸಲು ಎಲ್ಲರೂ ಹುಮ್ಮಸ್ಸಿನಿಂದ ಸಜ್ಜಾಗಿದ್ದರು. ಮೊದಲ ಕಾರ್ಯಕ್ರಮ ರಂಗೋಲಿ. ಸ್ವಯಂಸೇವಕರಾದ ಲಕ್ಚ್ಮಿ, ಸೌಂದರ್ಯ, ದರ್ಶನ್ ರಂಗೋಲಿ ಕಾರ್ಯಕ್ರಮ ನಡೆಸಲು ಸಿದ್ಧರಿದ್ದರು. ಅದರಂತೆ ಪ್ರಜ್ಞ ದಲ್ಲಿ ಮಕ್ಕಳೆಲ್ಲರಿಗೂ ರಂಗೋಲಿ ಸ್ಪರ್ಧೆಯನ್ನು ನಡೆಸಲಾಯಿತು. ಮಕ್ಕಳಂತೂ ಹುಮ್ಮಸ್ಸಿನಿಂದ ತಾವು ಕಲಿತಿದ್ದ ರಂಗೋಲಿಯನ್ನು ಬಿಡಿಸಲಾರಂಭಿಸಿದರು. ಬಣ್ಣ ಬಣ್ಣದ ಆ ಚಿತ್ತಾರ ಕಾಮನ ಬಿಲ್ಲನ್ನು ನೆನೆಪಿಸುತ್ತಿತ್ತು. ಅವರ ಮುಗ್ಧತೆಯ ಪ್ರತಿಬಿಂಬದಂತಿತ್ತು.

ಸ್ವಯಂಸೇವಕರನ್ನು ಕರೆದುಕೊಂಡು ವಾಹನವು ಕಲಿಯುವ ಮನೆಯನ್ನು ಪ್ರೇವೇಶಿಸಿತು. ಸುಮಾರು 20 ಜನರು ಆ ಹಬ್ಬದಲ್ಲಿ ಬಾಗವಹಿಸಲು ಸೇರಿದ್ದರು. ಅಲ್ಲಿದ್ದವರನ್ನು ಸೇರಿ ಒಟ್ಟು ಸುಮಾರು 40 ಸ್ವಯಂಸೇವಕರಿದ್ದರು. ಬಂದ ತಕ್ಷಣ ಎಲ್ಲರೂ ತಮ್ಮ ತಮ್ಮ ಚಟುವಟಿಕೆಯನ್ನು ನಡೆಸಲು ಸಿದ್ದರಾದರು. ವಾಹಿನಿಯಲ್ಲಿ ಚಿತ್ರಕಲಾ ಸ್ಪರ್ದೆ ಏರ್ಪಡಿಸಲಾಗಿತ್ತು. ಪವನ್ ದೀಕ್ಷ, ಅನುಷ ಮುಂತಾದವರು ಮಕ್ಕಳಿಗೆ ಡ್ರಾಯಿಂಗ್ ಶೀಟ್, ಕ್ರಯಾಂಸ್, ಮುಂತಾದವುಗಳನ್ನ ನೀಡಿ ಸ್ಪರ್ದೆಯನ್ನು ಶುರು ಮಾಡಿದರು. ಮಕ್ಕಳಂತೂ  ಅತ್ಯುತ್ಸಾಹದಿಂದ ಚಿತ್ರಗಳನ್ನು ಬಿಡಿಸಲಾರಂಭಿಸಿದರು. ಮನೆ, ಕೋಟೆ, ನವಿಲು, ಕಾಡು ಮುಂತಾದ ಸುಂದರ ಚಿತ್ರಗಳನ್ನು ಬಿಡಿಸಿ ಬಣ್ಣಗಳನ್ನು ತುಂಬಿದಾಗ ನವಿರಾದ ಚಿತ್ರಕಲೆ ಅಲ್ಲಿ ಚಿಗುರೊಡೆಯಿತು.

 

 

ಅದೇ ಸಮಯದಲ್ಲಿ ಗಣಕ ಕೊಟಡಿಯಲ್ಲಿ ಕಥೆ ಹೇಳುವ ಸ್ಪರ್ದೆ ನಡೆಯುತ್ತಿತ್ತು. ಪುಟ್ಟ ಮಕ್ಕಳ ಆ ಮುಗ್ದ ಕಥೆಗಳು ಕೇಳಲು ಮನಮೋಹಕವಾಗಿದ್ದವು. ಆಶ್ರಿತ, ರಚನ ಮತ್ತೊಬ್ಬರು ಅದನ್ನು ನಿರ್ವಹಿಸುತ್ತಿದ್ದರು. ಶ್ರದ್ಧ ದಲ್ಲಿ ಗಾಯನ ಸ್ಪರ್ದೆ ನಡೆಸಲಾಗುತ್ತಿತ್ತು. ಭಾವಗೀತೆ, ಚಿತ್ರಗೀತೆ ಗಳನ್ನು ಮಕ್ಕಳು ಕಲಿತು ಹಾಡಲು ಬಂದಿದ್ದರು.  ಅರವಿಂದ ಹಾಲಿನಲ್ಲಿ ಹತ್ತನೆ ತರಗತಿ ಅವರಿಗೆಂದೇ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮ ನಡೆಯುತ್ತಿತ್ತು. ಮಲ್ಲಿಕಾರ್ಜುನ್ ಅದನ್ನು ನಡೆಸುತ್ತಿದ್ದ. ಸ್ವಯಂ ಸೇವಕರೂ ಸಹ ಅವರೊಂದಿಗೆ ಸೇರಿ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹೀಗೆ ಎಲ್ಲಾ ಕಡೆಯಲ್ಲೂ ನಾನಾ ವಿಧವಾದ ಚಟುವಟಿಕೆಗಳು ಜರುಗುತ್ತಿತ್ತು. ಒಟ್ಟಿನಲ್ಲಿ ಕಲಿಯುವ ಮನೆ ಅಂದು ಮಿರಮಿರನೆ ಜಗಮಗಿಸುತ್ತಿತ್ತು.

ಇದಾದ ನಂತರ ದಿನದ ಅಚ್ಚುಮೆಚ್ಚಿನ ಕಾರ್ಯಕ್ರಮ ಸೂಪರ್ ಮಿನಿಟ್ ಪ್ರಾರಂಭವಾಯಿತು. ಗೌತಮ್ ಮತ್ತು ಚಂದನ ಅದರ ಉಸ್ತುವಾರಿಯನ್ನ ವಹಿಸಿಕೊಂಡಿದ್ದರು. ಸಂತೋಷ್ ಮೈಕ್ ಹಿಡುದು ಅದರ ನಿರ್ವಾಹಕನಾಗಿದ್ದ. ಕಲಿಯುವ ಮನೆಯ ಒಟ್ಟು ಅರವತ್ತ ನಾಲ್ಕು ಮಕ್ಕಳನ್ನು ಎಂಟು ತಂಡಗಳಾಗಿ ಮಾಡಿ ಸೂಪರ್ ಮಿನಿಟ್ ಅನ್ನು ಆಡಿಸಲಾಯಿತು. ಪ್ರತಿ ತಂಡಕ್ಕೆ ಒಬ್ಬ ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು. ಮಕ್ಕಳಿಗಂತೂ ಅದು ಮನರಂಜನೆಯ ಮಹಾಪುರವಾಗಿತ್ತು. ಎಲ್ಲರೂ ಸಂತೋಷದಿಂದ ಅದರಲ್ಲಿ ಪಾಲ್ಗೊಂಡು ಆನಂದಿಸಿದರು. ನಂತರ ಭೋಜನ ವಿರಾಮಕ್ಕೆ ಎಲ್ಲರೂ ತೆರಳಿದರು.

 

 

ವಿರಾಮದ ನಂತರ ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ. ಮೊದಲು ಅಝರ್ ಅವರು ಎಲ್ಲರನ್ನು ಉದ್ದೇಶಿಸಿ ಮಾತನಾಡಿದರು. ಸ್ವಯಂ ಸೇವಕರಾದ ರಕ್ಷಾರವರ ಭಕ್ತಿಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅನಂತ್ ಸರ್ ಅವರೂ ಸಹ ಎಲ್ಲರನ್ನೂ ಶ್ಲಾಘಿಸಿದರು.

ಆಟಗಳಲ್ಲಿ ಗೆದ್ದ ಮಕ್ಕಳಿಗೆ ವೇದಿಕೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಅದರೊಂದಿಗೆ ಹಾಸ್ಯ ನಾಟಕ, ಡೈನ ಮತ್ತು ರಮೇಶನ ಡೈಲಾಗ್, ಪ್ರಜ್ವಲ್ ನ ಮತ್ತೊಂದು ನಾಟಕ, ಮೂರು ತಂಡಗಳ ಗುಂಪು ಗಾಯನ, ಕಥೆ, ಹಾಡಿನ ಸ್ಪರ್ಧೆಯಲ್ಲಿ ಗೆದ್ದವರ ಪ್ರದರ್ಶನ, ಹೀಗೆ ನಾನಾ ರೀತಿಯ ಮನೋರಂಜನೆಯ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗೆ ಸಾಕ್ಷಿಯಾಯಿತು.

ಎಲ್ಲರ ಗಮನವನ್ನ ಸೆಳೆದಿದ್ದು ಪುಟ್ಟ ಮಕ್ಕಳ ಫ್ಯಾಷನ್ ಶೋ. ನಮ್ರತ ಮತು ಸೌಮ್ಯ ಹದಿನಾರು ಮಕ್ಕಳನ್ನು ಸುಂದರವಾಗಿ ಸಿದ್ಧಗೊಳಿಸಿದ್ದರು. ದೇಶದ ವಿವಿಧತೆಯಲ್ಲಿ ಏಕತೆಯನ್ನು ಮೂಲವಾಗಿಟ್ಟುಕೊಂಡು ಎಂಟು ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆಗಳನ್ನು ಮಕ್ಕಳಿಗೆ ತೊಡಿಸಲಾಗಿತ್ತು. ಕೇರಳ, ಗೋವ, ಬೆಂಗಾಲ್, ಗುಜರಾತ್, ಪಂಜಾಬ್, ಮಹಾರಾಷ್ಟ್ರ, ರಾಜಸ್ತಾನ ಮತ್ತು ಕರ್ನಾಟಕ ದ ವೇಶಭೂಷಣದಲ್ಲಿ ಮಕ್ಕಳಂತೂ ತುಂಬಾ ಸುಂದರವಾಗಿ ಕಾಣುತ್ತಿದ್ದರು. ವೇದಿಕೆಯ ಮೇಲೆ ನಡೆದು ಎಲ್ಲರ ಮನಗೆದ್ದರು.

 

 

 

 

ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ಕೊಡಲಾಯಿತು. ಪ್ರತೀ ಮಕ್ಕಳಿಗೂ ಪೆನ್ ಮತ್ತು ಚಾಕೊಲೇಟ್ ಕೊಡುವುದರ ಮೂಲಕ ಕಾರ್ಯಕ್ರಮ ಅಂತ್ಯಗೊಂಡಿತು.

 

ಒಂದು ತಿಂಗಳ ಸ್ವಯಂಸೇವಕರ ಕಾರ್ಯಕ್ಕೆ ಪ್ರತಿಫಲ ದೊರೆತಿತ್ತು. ಅದೇ ಮಕ್ಕಳ ಸಂತೋಷ ಮತ್ತು ಪ್ರತಿಭೆಯ ಅನಾವರಣ. ಅದು ಮತ್ತೂ ಮುಂದುವರಿಯುತ್ತದೆ. ಯುವಕರೇ ದೇಶದ ಶಕ್ತಿ ಎಂದು ಹೇಳಿದ ವಿವೇಕಾನಂದರ ಮಾತು ಇಲ್ಲಿ ಪ್ರತಿಧ್ವನಿಸುತ್ತಿತ್ತು. ಕಲಿಯುವ ಮನೆಯ ಗ್ರಾಮದ ಮಕ್ಕಳಿಗೋಸ್ಕರ ನಾನಾ ಕಡೆಯಿಂದ ಯುವಕರು ಬಂದಿದ್ದಾರೆ, ಬರುತ್ತಲೆ ಇರುತ್ತಾರೆ. ಏಕೆಂದರೆ ಭಾರತ ವಿಶ್ವಗುರು ಆಗುವ ಕಾಲ ಸನ್ನಿಹಿತವಾಗಿದೆ.

Leave a Reply

Your email address will not be published. Required fields are marked *